ವೀಣೆ ವೆಂಕಟಗಿರಿಯಪ್ಪ
	1887-1952. ಪ್ರಸಿದ್ಧ ವೈಣಿಕ ವಿದ್ವಾಂಸರು. 1887 ಜೂನ್ 24ರಂದು ಮೈಸೂರಿನಲ್ಲಿ ಜನಿಸಿದರು. ಇವರು ವೀಣೆಯ ಬಾಲ್ಯಪಾಠವನ್ನು ತಮ್ಮ ಮಾತಾಮಹರಾದ ವೀಣಾ ವಿದ್ವಾನ್ ದೊಡ್ಡಸುಬ್ಬರಾಯ ರಲ್ಲೂ ಪ್ರೌಢಪಾಠವನ್ನು ತಮ್ಮ ಸೋದರಮಾವ ಚಿಕ್ಕಸುಬ್ಬರಾಯರಲ್ಲೂ ನಡೆಸಿದರು. ವೈಣಿಕ ಶಿಖಾಮಣಿ ಶೇಷಣ್ಣನವರ ವೀಣಾವಾದನವನ್ನು ವಿಶೇಷ ವಾಗಿ ಕೇಳಿ ಅದರಿಂದ ಬಹಳ ಪ್ರಭಾವಿತರಾದ ಇವರು, ಅವರಲ್ಲೂ ಕೆಲಕಾಲ ಶಿಷ್ಯ ರಾಗಿದ್ದರು. ತಮ್ಮ ಪ್ರತಿಭೆ ಯಿಂದ ಚಿಕ್ಕಂದಿನಲ್ಲಿಯೇ ಮೈಸೂರು ಅರಮನೆಯ ಆಸ್ಥಾನವಿದ್ವಾಂಸರಾಗಿ ನೇಮಕಗೊಂಡು ಮಹಾರಾಜರ ಅಭಿಮಾನಕ್ಕೆ ಪಾತ್ರರಾದರು. ಅರಮನೆ ಬ್ಯಾಂಡಿನ ನಿರ್ದೇಶಕರಾಗಿ, ಆಸ್ಥಾನವಿದ್ವಾಂಸರ ಮುಖ್ಯಸ್ಥರಾಗಿ, ಮಹಾರಾಣಿ ಪ್ರೌಢಶಾಲೆಯ ಸಂಗೀತ ಅಧ್ಯಾಪಕರಾಗಿ, ಮೈಸೂರು ಸರ್ಕಾರದ ಪರೀಕ್ಷಾ ಮಂಡಲಿಯ ಅಧ್ಯಕ್ಷರಾಗಿ ಇವರು ಕಾರ್ಯನಿರ್ವಹಿಸಿದರು.

	ಇವರ ವೀಣಾ ಶೈಲಿಯಲ್ಲಿ ಮೈಸೂರು ವೈಣಿಕ ಸಂಪ್ರದಾಯದ ಎಲ್ಲ ವೈಶಿಷ್ಟ್ಯಗಳು ಸಂಗಮವಾಗಿದ್ದುವು. ವಾದನತಂತ್ರದಲ್ಲಿ ಬೆರಳುಗಳ ವೇಗ, ಮೀಟಿನ ಮಾರ್ದವತೆ ಮತ್ತು ಇಂಪಾದ ನಾದ ಇವರ ವಾದನದ ಲ್ಲಿದ್ದ ಪ್ರಧಾನ ಗುಣಗಳು. ಪಾಶ್ಚಾತ್ಯ ಸಂಗೀತದಲ್ಲಿ ವಿಶೇಷ ಪರಿಶ್ರಮ ಪಡೆದು ಇಲ್ಲಿನ ಸಂಗೀತಕ್ಕೆ ಅದರ ಕೆಲವು ಅಂಶಗಳನ್ನು ಅಳವಡಿಸಿ ಕೊಳ್ಳುವ ಪ್ರಯೋಗಗಳನ್ನು ಇವರು ನಡೆಸಿದ್ದರು. ಹಿಂದುಸ್ಥಾನೀ ಸಂಗೀತದ ಬಗೆಗೂ ಇವರಿಗೆ ವಿಶೇಷವಾದ ಒಲವಿತ್ತು. ಭಾರತಾದ್ಯಂತ ಪ್ರವಾಸಮಾಡಿ ತಮ್ಮ ಸುಮಧುರ ವೀಣಾವಾದನದಿಂದ ರಸಿಕರ ಮೆಚ್ಚುಗೆ ಗಳಿಸಿ ಪ್ರಸಿದ್ಧರಾದರು. ಇವರು ಬರೆದಿರುವ ಸಂಗೀತಾಮೃ ತಸಾರ ಎಂಬ ಗ್ರಂಥ ಸಂಗೀತಪ್ರಪಂಚಕ್ಕೆ ಇವರು ಕೊಟ್ಟ ಬೆಲೆಯುಳ್ಳ ಕಾಣಿಕೆ. ಇವರು ರಚಿಸಿರುವ ವರ್ಣಗಳು, ಕೃತಿಗಳು ಮತ್ತು ತಿಲ್ಲಾನಗಳು ಶ್ರೇಷ್ಠ ರಚನೆಗಳಾಗಿವೆ. ಇವರು ಸಂಗೀತದಲ್ಲಿ ಸಂಪ್ರದಾಯ ಶುದ್ಧತೆಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಿದ್ದರೂ ಕಲಾಸೌಂದರ್ಯವನ್ನು ಹೆಚ್ಚಿಸುವ ಹೊಸ ಪ್ರಯೋಗಗಳಿಗೂ ಮನ್ನಣೆ ನೀಡುತ್ತಿದ್ದರು. ಇವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರು ವೈಣಿಕಪ್ರವೀಣ ಎಂಬ ಬಿರುದನ್ನೂ ಜಯಚಾಮರಾಜ ಒಡೆಯರು ಸಂಗೀತವಿಶಾರದ ಎಂಬ ಬಿರುದನ್ನೂ ಕಂಚಿ ಕಾಮಕೋಟಿ ಪೀಠಾಧೀಶರು ವೈಣಿಕಶಿಖಾಮಣಿ ಎಂಬ ಬಿರುದನ್ನೂ ತೋಡಾ ಮತ್ತು ಸ್ವರ್ಣಪದಕಗಳೊಂದಿಗೆ ಇತ್ತು ಗೌರವಿಸಿದರು. ಇವರು ತಮ್ಮ ಅರವತ್ತೈದನೆಯ ವಯಸ್ಸಿನಲ್ಲಿ 1952 ಜನವರಿ 31ರಂದು ನಿಧನರಾದರು.							
		(ಆರ್.ಎನ್.ಡಿ.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ